ನೂತನ ಪಕ್ಷ ಸ್ಥಾಪನೆಗೆ ಕಮಲ್ ಸಿದ್ಧತೆ


ಚೆನ್ನೈ, ಸೆ.15: ತಮಿಳುನಾಡಿನ ರಾಜಕೀಯ ಪ್ರವೇಶಕ್ಕೆ ಮೆಗಾ ಸ್ಟಾರ್ ಕಮಲಹಾಸನ್ ಸಿದ್ಧತೆ
ನಡೆಸಿದ್ದು, ಶೀಘ್ರ ಅವರು ಹೊಸ ಪಕ್ಷ ಸ್ಥಾಪಿಸಲಿದ್ದಾರೆ.
ಈ ಮೂಲಕ ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
“ತಮಿಳುನಾಡಿನ ರಾಜಕಾರಣ ಬದಲಾಗಲು ಸಾಧ್ಯವಿದೆ ಮತ್ತು ನಾನು ಆ ಬದಲಾವಣೆಯನ್ನು
ತರಲು ಬಯಸಿದ್ದೇನೆ” ಎಂದು ಕಮಲಹಾಸನ್ ಹೇಳಿಕೆ ನೀಡಿದ್ದಾರೆ.
ಸೆಪ್ಟಂಬರ್ ಅಂತ್ಯದಲ್ಲಿ ಹೊಸ ಪಕ್ಷ ಪ್ರಕಟಿಸುವ ಸಾಧ್ಯತೆ ಇದೆ. ಈ ವರ್ಷದ ನವೆಂಬರ್‍ನಲ್ಲಿ ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಅಷ್ಟರಲ್ಲಿ ಕಮಲಹಾಸನ್ ಅವರು ಪಕ್ಷವನ್ನು
ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸ ರಾಜಕೀಯ ಪಕ್ಷವನ್ನು ಶೀಘ್ರವೇ ಆರಂಭಿಸುವುದಾಗಿ ಇತ್ತೀಚೆಗಷ್ಟೆ 62ರ ಹರೆಯದ
ನಟ ಕಮಲ ಹಾಸನ್ ಹೇಳಿದ್ದರು. ತಮಿಳುನಾಡಿನ ಎಲ್ಲ ಸಮಸ್ಯೆಗಳಿಗೆ ತನ್ನಿಂದ ತಕ್ಷಣದ ಪರಿಹಾರವೇನೂ ಸಿಗದು. ಆದರೂ ತಾನು ರಾಜ್ಯ ರಾಜಕಾರಣದಲ್ಲಿ, ಆಡಳಿತದಲ್ಲಿ ಬದಲಾವಣೆಯ ಪ್ರಕ್ರಿಯೆಯನ್ನು ಆರಂಭಿಸಲು ಬಯಸಿದ್ದೇನೆ” ಎಂದು ಹೇಳಿದ್ದಾರೆ.
ತನ್ನ ರಾಜಕೀಯ ಮಹತ್ವಾಕಾಂಕ್ಷೆಯ ಬಗ್ಗೆ ಸ್ಪಷ್ಟ ಉತ್ತರ ನೀಡಲು ಇಷ್ಟಪಡದ ಕಮಲಹಾಸನ್, “ನನಗೆ ನೀವು ಮತ ಹಾಕಿ ಬಳಿಕ ನನ್ನನ್ನು ಕಿತ್ತೊಗೆಯಲು ಐದು ವರ್ಷ ತೆಗೆದುಕೊಳ್ಳಬೇಡಿ. ನಾನು ಸರಿಯಾಗಿ
ಕೆಲಸ ಮಾಡಲಿಲ್ಲ ಎಂದಾದರೆ ತಕ್ಷಣವೇ ನನ್ನನ್ನು ಕಿತ್ತೆಸೆಯಿರಿ’ ಎಂದು ಹೇಳಿದರು.
ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ನನ್ನ ಮುಖ್ಯ
ಗುರಿಯಾಗಿದೆ. ಒಂದೋ ನಾನು ರಾಜಕಾರಣದಿಂದ ತೊಲಗಬೇಕು; ಇಲ್ಲವೇ ಭ್ರಷ್ಟಾಚಾರದ ಪಿಡುಗು
ರಾಜಕಾರಣದಿಂದ ತೊಲಗಬೇಕು’ ಎಂದು ಕಮಲಹಾಸನ್ ನಿಷ್ಠುರವಾಗಿ ಹೇಳಿದ್ದಾರೆ.
ಸೆಪ್ಟಂಬರ್ ಒಂದರಂದು ಕಮಲಹಾಸನ್ ಅವರು, ಕೇರಳ ಮುಖ್ಯಮಂತ್ರಿ ಪಿಣರಾಯ್ವಿ ಜಯನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಕಮಲ್ ಸಿಪಿಎಂ ಪಕ್ಷ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಅವರು ಯಾವ ಸಿದ್ಧಾಂತದ ಪಕ್ಷ ಸ್ಥಾಪಿಸುತ್ತಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ರಾಜಕೀಯದಿಂದ ಸಾಮಾಜಿಕ
ಸುಧಾರಣೆಯಾಗುವುದಾದರೆ ನಾನೇಕೇ ರಾಜಕಾರಣ ಪ್ರವೇಶ ಮಾಡಬಾರದು ಎಂದೂ ಅವರು ಪ್ರಶ್ನಿಸಿದ್ದಾರೆ.
ತಮಿಳುನಾಡಿನ ರಾಜಕಾರಣದಲ್ಲಿ
ಹೆಚ್ಚಾಗಿ ಖ್ಯಾತ ನಟ ನಟಿಯರೇ
ಪ್ರಮುಖವಾಗಿ ಕಾಣುತ್ತಾರೆ.
ಜೆ.ಜಯಲಲಿತಾ, ಎಂ.ಜಿ.
ರಾಮಚಂದ್ರನ್ ಮತ್ತು ವಿಜಯಕಾಂತ್
ಬಳಿಕ ಇದೀಗ ಕಮಲ್ ಹಾಸನ್
ಸರದಿ ಆರಂಭಗೊಂಡಿದೆ.
ಕೆಲವು ದಿನಗಳಿಂದ ಕಮಲ್
ಹಾಸನ್ ಅವರು ಎಐಎಡಿ-
ಎಂಕೆ ಮತ್ತು ಡಿಎಂಕೆ ವಿರುದ್ಧ
ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.
ಪ್ರಸಕ್ತ ಅವರು ಬಿಗ್ ಬಾಸ್
ರಿಯಾಲಿಟಿ ಶೋ ಒಂದರಲ್ಲಿ
ಕೆಲಸ ನಿರ್ವಹಿಸುತ್ತಿದ್ದಾರೆ.

Share this post