ಹೆದ್ದಾರಿ ಟೋಲ್ ರದ್ದ್ದಿಲ್ಲ: ಉತ್ತಮ ಸೇವೆಗೆ ಹಣ ಪಾವತಿ ಅನಿವಾರ್ಯ: ಗಡ್ಕರಿ


ಪುಣೆ, ಜ. 2- `ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ (ಟೋಲ್) ವಸೂಲಿಗೆ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ, ಉತ್ತಮಸೇವೆ ಬೇಕೆಂದರೆ ಜನ ಹಣಪಾವತಿ ಮಾಡಲೇಬೇಕು` ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸುಂಕ ವಸೂಲಿ ನಿಲ್ಲಬೇಕು ಎಂಬ ಅಭಿಪ್ರಾಯವನ್ನು ಸಚಿವರು ಒಪ್ಪಿದರಾದರೂ ಈ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ವಸೂಲಿಗೆ ವಿನಾಯಿತಿ ನೀಡುವುದನ್ನು ತಳ್ಳಿ ಹಾಕಿದರು.
ನಿನ್ನೆ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಖ್ಯಾತ ಮರಾಠಿ ಕವಿ ರಾಮದಾಸ್ ಫುಟಾನೆ ಅವರು ನಡೆಸಿದ ಸಂದರ್ಶನವೊಂದರಲ್ಲಿ ಗಡ್ಕರಿ `ಜಗತ್ತಿನಾದ್ಯಂತ ಮೋಟಾರು ವಾಹನ ಚಾಲಕರಿಗೆ ಇಂಧನ ಮತ್ತು ಸಮಯ ಎರಡು
ಉಳಿತಾಯ ಮಾಡುವ ರಸ್ತೆಗಳನ್ನು ನಿರ್ಮಿಸಿ ಶುಲ್ಕ ವಸೂಲು ಮಾಡುವುದು ಸರ್ವೇ ಸಾಮಾನ್ಯ` ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ವಸೂಲಿಯ ಬಗ್ಗೆ ಪ್ರಶ್ನಿಸಿದಾಗ `ಉತ್ತಮ ರಸ್ತೆಗಳು ಇಂಧನ ಮತ್ತು ಸಮಯವನ್ನು ಉಳಿಸುವುದಷ್ಟೇ ಅಲ್ಲದೆ ನಿಮ್ಮ ಜೀವಕ್ಕೂ ಸುರಕ್ಷೆ ನೀಡುತ್ತಿವೆ. ನಿಮಗೆ ಉತ್ತಮ ಸೇವೆ ಬೇಕೆಂದರೆ ಅದಕ್ಕೆ ಹಣ ಕೊಡಲೇಬೇಕು` ಎಂದು ಉತ್ತರಿಸಿದರು. `ಒಂದು ಕಾಲದಲ್ಲಿ ಅಸ್ತವ್ಯಸ್ತ ರಸ್ತೆ ಸಂಚಾರದಿಂದಾಗಿ ಪುಣೆಯಿಂದ ಮುಂಬೈಗೆ ಬರಲು 9 ಗಂಟೆಗಳು ಬೇಕಾಗುತ್ತಿತ್ತು. ಈಗ ಅದೇ ದೂರವನ್ನು 2 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ` ಎಂದೂ ಗಡ್ಕರಿ ಹೇಳಿದರು.
`ಜಗತ್ತಿನಾದ್ಯಂತ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದು ನಿಲ್ಲಬೇಕೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ಆ ಹಂತದಲ್ಲಿ
ಶುಲ್ಕ ಸಂಗ್ರಹಣೆ ವಿನಾಯಿತಿಗೆ ಮಾತು ಕೊಡಲಾರೆ` ಎಂದರು.
ಮುಂದಿನ 5 ವರ್ಷಗಳಲ್ಲಿ 7 ಲಕ್ಷ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ 83,677 ಕಿ.ಮೀ. ಉದ್ದದ ರಸ್ತೆ ನಿರ್ಮಿಸುವ ಯೋಜನೆ ಹೊಂದಿದೆ. ಈ ಬೃಹತ್ ರಸ್ತೆ ನಿರ್ಮಾಣ ಕಾರ್ಯಕ್ರಮಕ್ಕಾಗಿ ಹಣ ಹೊಂದಿಸಲು ಆಂತರಿಕ ಮತ್ತು ಜಾಗತಿಕ ನಿಧಿ ಹೂಡಿಕೆಯನ್ನು ಆಕರ್ಷಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶೇಷ ಘಟಕವೊಂದನ್ನು ರಚಿಸಿದೆ. ಆರೆಸ್ಸೆಸ್ ಜತೆ ಗಡ್ಕರಿಯವರ ಆಪ್ತತೆಯ ಬಗ್ಗೆ ಪ್ರಶ್ನಿಸಿದಾಗ ನಾನು ಎಂದೂ ಅದನ್ನು ಮುಚ್ಚಿಟ್ಟಿಲ್ಲ ಎಂದು ದಿಟ್ಟವಾಗಿ ಉತ್ತರಿಸಿದರು.
`ಆರೆಸ್ಸೆಸ್ ಜತೆಗಿನ ನನ್ನ ಸಂಬಂಧವನ್ನು ನಾನು ಎಂದೂ ಮುಚ್ಚಿಡಲಿಲ್ಲ. ಆದರೆ ಚುನಾವಣೆ ಯಲ್ಲಿ ಎಲ್ಲಾ ಧರ್ಮದವರೂ
ನನಗೆ ಮತ ನೀಡಿ ಆಯ್ಕೆ ಮಾಡಿದರು` ಎಂದೂ ಅವರು ಹೇಳಿದರು. ವಂಶಪಾರಂಪರ್ಯ ರಾಜಕೀಯವನ್ನು ಖಂಡಿಸಿದ
ಅವರು ನಾನು ತತ್ವಗಳನ್ನು ನಂಬಿ ಬದುಕುವವನು ಎಂದರು. ನಾನು ನನ್ನ ಕುಟುಂಬದ ಯಾರಿಗೂ ಟಿಕೆಟ್ ಕೊಡಿಸಿಲ್ಲ.
ನನ್ನ ಕುಟುಂಬದಿಂದ ಯಾರೊಬ್ಬರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಗಡ್ಕರಿ ಹೇಳಿದರು.

Share this post