ದೇಶದಲ್ಲಿ 20 ಲಕ್ಷ ಗ್ಲುಕೋಮಾ ರೋಗಿಗಳು: ಡಾ. ಸಿಬಿಲ್ ಸಾಲಿನ್ಸ್

ಬೀದರ, ಮಾ. 14: ದೇಶದ ಜನಸಂಖ್ಯೆಯಲ್ಲಿ ಶೇ 1 ರಷ್ಟು ಜನ ಅಂಧರಿದ್ದಾರೆ. ಇವರಲ್ಲಿ ಸುಮಾರು 20 ಲಕ್ಷ ಜನ ಗ್ಲುಕೋಮಾದಿಂದ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವೆಲ್‍ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ತಿಳಿಸಿದರು.
ನಗರದ ಗೋಲೆಖಾನಾ ದಲ್ಲಿರುವ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ವಿಶ್ವ ಗ್ಲುಕೋಮಾ ದಿನಾಚರಣೆ ಅಂಗವಾಗಿ ಬುಧವಾರ(14-3-2018) ನಡೆದ ಯಶಸ್ವಿನಿ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಕಾರ್ಡ್ ಹೊಂದಿರುವ ರೋಗಿಗಳ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಣ್ಣಿನ ರೋಗಗಳಲ್ಲಿ ಗ್ಲುಕೋಮಾ ಭಯಾನಕವಾದದ್ದು. ರೋಗಿಗೆ ಅರಿವಿಲ್ಲದಂತೆಯೇ ದಿನೇ ದಿನೇ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತ ಹೋಗುತ್ತದೆ ಎಂದು ತಿಳಿಸಿದರು.
ಚಿಕಿತ್ಸೆಗೆ ತಡ ಮಾಡಿದರೆ ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಂತರ ಏನೂ ಮಾಡಿದರೂ ಪ್ರಯೋಜನ ಆಗದು. ಹೀಗಾಗಿ 40 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಒಮ್ಮೆಯಾದರೂ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಗ್ಲುಕೋಮಾ ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ಮಾಡಿದರು.
ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯು 50 ವರ್ಷಗಳಿಂದ ಜಿಲ್ಲೆಯ ರೋಗಿಗಳ ಸೇವೆಯಲ್ಲಿದೆ. ನನ್ನ ತಂದೆ ವೈದ್ಯ ವೃತ್ತಿಯ ಜತೆಗೆ ವಿಧವೆಯರು, ಕುಷ್ಠರೋಗಿಗಳು ಹಾಗೂ ಅನಾಥ ಮಕ್ಕಳ ಸೇವೆ ಮಾಡಿದ್ದರು. ನಾನೂ ಅವರ ಮಾರ್ಗದಲ್ಲಿ ಸಾಗಿದ್ದೇನೆ. ಅಂಧರ ಬಾಳಲ್ಲಿ ಬೆಳಕು ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ 2017-18ನೇ ಸಾಲಿನಲ್ಲಿ 22,283 ಜನರ ನೇತ್ರ ತಪಾಸಣೆ ಮಾಡಿದ್ದು, 3,587 ಜನರ ನೇತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶೇ 75 ರಷ್ಟು ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಸಂಘದ ಅಧಿಕಾರಿ ದಿಲೀಪ ಡೋಂಗರೆ ಮಾತನಾಡಿ, ಗ್ಲುಕೋಮಾ ಮೌನವಾಗಿ ಕಣ್ಣಿನ ದೃಷ್ಟಿಯನ್ನು ಕೊಲ್ಲುವ ಕಾಯಿಲೆಯಾಗಿದೆ. 40 ವರ್ಷ ಮೇಲ್ಪಟ್ಟ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರಲ್ಲಿ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವರಿಗೆ ಅನುವಂಶಿಕವಾಗಿ ಬರುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದರು.
ನೇತ್ರ ತಪಾಸಣೆ ಮೂಲಕ ಗ್ಲುಕೋಮಾ ಪತ್ತೆ ಹೆಚ್ಚಬಹುದು. ಚಿಕಿತ್ಸೆಯನ್ನೂ ಪಡೆದುಕೊಳ್ಳ ಬಹುದು ಎಂದು ಹೇಳಿದರು.
ನಗರಸಭೆ ಸದಸ್ಯ ಫಿಲೋಮನ್‍ರಾಜ್ ಪ್ರಸಾದ್ ಮಾತನಾಡಿ, ಕಣ್ಣಿದ್ದರೆ ಮಾತ್ರ ಸೃಷ್ಟಿಯ ಸೋಬಗನ್ನು ನೋಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ತಿಳಿಸಿದರು.
ಡಾ. ಸಾಲಿನ್ಸ್ ಆಸ್ಪತ್ರೆಯು ಮಾನವೀಯ ಸೇವೆಯ ಮೂಲಕ ಜಿಲ್ಲೆಯ ಬಡ ರೋಗಿಗಳಿಗೆ ಆಸರೆಯಾಗಿದೆ ಎಂದು ಹೇಳಿದರು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋ ಜಕ ಡಾ. ನಂದಕುಮಾರ ತಾಂದಳೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಜಿಲ್ಲಾ ಸಂಯೋಜಕ ಬಾಲಾಜಿ, ಯಶಸ್ವಿನಿ ಜಿಲ್ಲಾ ಸಂಯೋಜಕ ಪ್ರಶಾಂತ ಸೋಪಾನ್, ಡಾ. ವೀರೇಂದ್ರ ಪಾಟೀಲ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ ಪುಟ್ಟರಾಜ ಬಲ್ಲೂರಕರ್ ನಿರೂಪಿಸಿದರು.
ಶಿಬಿರದಲ್ಲಿ 150 ಜನರ ನೇತ್ರ ತಪಾಸಣೆ ಮಾಡಲಾಯಿತು. ಅಗತ್ಯ ಇರುವ 50 ಜನರ ಪೈಕಿ 10 ಮಂದಿಗೆ ಆರ್‍ಎಸ್‍ವಿವೈ, 12 ಜನರಿಗೆ ಯಶಸ್ವಿನಿ ಹಾಗೂ 28 ಮಂದಿಗೆ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘದ ವತಿಯಿಂದ ಗುರುವಾರ ಶಸ್ತ್ರಚಿಕಿತ್ಸೆ ನಡೆಯಲಿದೆ.

Share this post