ನವದೆಹಲಿ: ಲೋಕಸಭಾ ಚುನಾವಣೆಯನ್ನು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಎದುರಿಸಲು ನಿರ್ಧರಿಸಿರುವ ಜಾತ್ಯತೀತ ಜನತಾದಳವು (ಜೆಡಿಎಸ್), ಬಿಜೆಪಿ ನೇತೃತ್ವದ ಎನ್‌ಡಿಎಗೆ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾಗಿದೆ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಪ್ರಕ್ರಿಯೆಯನ್ನು ದಸರಾ ಹಬ್ಬದ ನಂತರ ನಡೆಸಲು ಉಭಯ ಪಕ್ಷಗಳ ಉನ್ನತ ನಾಯಕರು ನಿರ್ಧರಿಸಿದ್ದಾರೆ.
ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ 2006–07ರಲ್ಲಿ ಅಧಿಕಾರ ನಡೆಸಿದ್ದವು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನವನ್ನು ವಾಗ್ದಾನದಂತೆ 20 ತಿಂಗಳ ಬಳಿಕ ಬಿಟ್ಟುಕೊಟ್ಟಿಲ್ಲ ಎಂಬ ಕಾರಣಕ್ಕೆ ‘ಮೈತ್ರಿ’ ಸರ್ಕಾರ ಪತನಗೊಂಡಿತ್ತು. ಇದೀಗ ಎರಡೂ ಪಕ್ಷಗಳು ಎರಡನೇ ಇನಿಂಗ್ಸ್ ಆರಂಭಿಸಿವೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶಾ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ ಜೆಡಿಎಸ್–ಬಿಜೆಪಿ ಮೈತ್ರಿ ಸಂಬಂಧ ಸುದೀರ್ಘವಾಗಿ ಸಮಾಲೋಚಿಸಿದರು. ಎನ್‌ಡಿಎ ಒಕ್ಕೂಟಕ್ಕೆ ಅಧಿಕೃತವಾಗಿ ಸೇರಲು ಕುಮಾರಸ್ವಾಮಿ ಸಮ್ಮತಿ ಸೂಚಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ರಾಷ್ಟ್ರ ರಾಜಧಾನಿಯಲ್ಲಿ ಇದ್ದರೂ ಅವರಿಗೆ ಈ ಸಭೆಗೆ ಆಹ್ವಾನ ಇರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯದ ನಾಯಕರನ್ನು ನಿರಂತರವಾಗಿ ಕಡೆಗಣಿಸುತ್ತಿರುವ ಬಿಜೆಪಿ ವರಿಷ್ಠರು, ‘ಮೈತ್ರಿ’ ಮಾತುಕತೆಯಿಂದಲೂ ದೂರವಿಟ್ಟು ಸಂದೇಶ ರವಾನಿಸಿದರು. ಆದರೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹಾಜರಿದ್ದು ಮೈತ್ರಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ದೆಹಲಿಯಲ್ಲಿ ಇದ್ದರೂ ‘ದೋಸ್ತಿ’ ಮಾತುಕತೆಯಿಂದ ದೂರ ಉಳಿದರು. ಅವರು, ಅಮಿತ್ ಶಾ ಅವರನ್ನು ಎರಡು ವಾರಗಳ ಹಿಂದೆ ಭೇಟಿ ಮಾಡಿ ‘ಮೈತ್ರಿ’ ಕುರಿತು ಆರಂಭಿಕ ಹಂತದ ಚರ್ಚೆ ನಡೆಸಿದ್ದರು. ಬಳಿಕ ಮಾತುಕತೆಯ ಹೊಣೆಯನ್ನು ಕುಮಾರಸ್ವಾಮಿಗೆ ವಹಿಸಿದ್ದರು. .
ಮಹತ್ವದ ಸಭೆಯ ಬಳಿಕ, ನಡ್ಡಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ, ‘ಮೈತ್ರಿಕೂಟದ ಭಾಗವಾಗಲು ಜೆಡಿಎಸ್ ನಿರ್ಧರಿಸಿರುವುದು ನನಗೆ ಖುಷಿ ತಂದಿದೆ. ಪಕ್ಷವನ್ನು ಎನ್‌ಡಿಎಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಎನ್‌ಡಿಎ ಮತ್ತು ಪ್ರಧಾನಿಯವರ ‘ನವ ಭಾರತ, ಬಲಿಷ್ಠ ಭಾರತ’ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದರು. .
ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ‘ಒಳ್ಳೆಯ ದಿನ, ಒಳ್ಳೆಯ ಸಮಯ ನೋಡಿಕೊಂಡು ಯಾರಿಗೆಷ್ಟು ಕ್ಷೇತ್ರಗಳು ಎಂಬುದನ್ನು ದಸರಾ ನಂತರ ನಿರ್ಧಾರ ಮಾಡುತ್ತೇವೆ’ ಎಂದರು. .
‘ಯಾರು ಯಾರಿಗೆ ಎಷ್ಟು ಸೀಟು ಹಂಚಿಕೆ ಆಗುತ್ತದೆ ಎನ್ನುವುದು ಮುಖ್ಯವಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವಿಷಯವನ್ನು ನಾನು ಬಿಜೆಪಿ ವರಿಷ್ಠರಿಗೆ ಒತ್ತಿ ಹೇಳಿದ್ದೇನೆ. ನನ್ನ ಮಾತಿಗೆ ಅವರೂ ಸಹಮತ ವ್ಯಕ್ತಪಡಿಸಿದರು’ ಎಂದು ಅವರು ತಿಳಿಸಿದರು.