: ಜಿ–20 ಶೃಂಗದ ನೇತೃತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಅಮೆರಿಕ ಅಭಾರಿಯಾಗಿದೆ. ದೆಹಲಿಯಲ್ಲಿ ನಡೆದ ಜಿ–20 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಅಧ್ಯಕ್ಷ ಜೋ ಬೈಡನ್ ’ಸಕಾರಾತ್ಮಕ ಮತ್ತು ಆಶಾಭಾವನೆಯಲ್ಲಿದ್ದಾರೆ’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆ ಸೋಮವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಭದ್ರತಾ ಮಂಡಳಿಯ(ಎನ್‌ಎಸ್‌ಸಿ) ಕಾರ್ಯತಂತ್ರ ಸಂವಹನದ ಸಮನ್ವಯ ಅಧಿಕಾರಿ ಜಾನ್ ಕಿರ್ಬಿ, ನವದೆಹಲಿಯಲ್ಲಿ ನಡೆದ ಜಿ–20 ಶೃಂಗ ಸಭೆಯಲ್ಲಿ ಉತ್ತಮ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜತೆಗೆ ನಿರ್ಣಯಗಳನ್ನು ಕಾರ್ಯರೂಪಕ್ಕೆ ತಂದ ರೀತಿಗಾಗಿ ಜಿ–20 ಶೃಂಗದ ಅಧ್ಯಕ್ಷತೆ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ನಾವೆಲ್ಲರೂ ಅಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ. ಸಾಮಾನ್ಯಸಭೆಯಲ್ಲಿ 193 ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನ ಆರಂಭವಾಗಿದ್ದು, ಅಮೆರಿಕದ ಆದ್ಯತೆಗಳು ಮತ್ತು ವಿದೇಶಾಂಗ ನೀತಿ ವಿಚಾರಗಳ ಕುರಿತು ಕಿರ್ಬಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.