ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ ಮತ್ತು ಕಚೇರಿ ಮೇಲೆ ನಡೆಸಿದ ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಮತ್ತು ಲೆಕ್ಕಕ್ಕೆ ಸಿಗದ ₹31 ಲಕ್ಷ ಹಣ ವಶಕ್ಕೆ ಪಡೆದಿರುವುದಾಗಿ ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ತಿಳಿಸಿದೆ.
ಇ.ಡಿ ಅಧಿಕಾರಿಗಳ ತಂಡ ಕಳೆದ ಶನಿವಾರ (ಫೆ.10) ನಾರಾ ಭರತ್ ರೆಡ್ಡಿ, ಅವರ ತಂದೆ ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ ಮತ್ತು ಸಂಬಂಧಿಗಳ ಹಲವು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು. ಇ.ಡಿ ಅಧಿಕಾರಿಗಳ ಶೋಧ ಕಾರ್ಯವು ಭಾನುವಾರ ರಾತ್ರಿ 11.30ಕ್ಕೆ ಅಂತ್ಯಗೊಂಡಿತ್ತು.
ಬಳ್ಳಾರಿಯ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ವೊಂದರ ಆಧಾರದ ಮೇಲೆ ತನಿಖೆ ನಡೆಸುತ್ತಿರುವುದಾಗಿ ಇ.ಡಿ ಮಂಗಳವಾರ ಮಾಹಿತಿ ಹಂಚಿಕೊಂಡಿದೆ.
‘ಸೂರ್ಯ ನಾರಾಯಣ ರೆಡ್ಡಿ, ಭರತ್ ರೆಡ್ಡಿ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)2002ರ ಅಡಿಯಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ದಾಳಿ ನಡೆಸಲಾಗಿತ್ತು. ಶೋಧದ ವೇಳೆ ಮಹತ್ವದ ದಾಖಲೆಗಳು, ಅವರ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳು, ಸ್ಥಿರ ಮತ್ತು ಚರ ಆಸ್ತಿಗಳ ವಿವರಗಳು ಮತ್ತು ಲೆಕ್ಕಕ್ಕೆ ಸಿಗದ ₹31 ಲಕ್ಷ ವಶಕ್ಕೆ ಪಡೆಯಲಾಗಿದೆ’ ಎಂದು ಇ.ಡಿ ತಿಳಿಸಿದೆ.
‘ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳಿಗೆ ಮೊದಲು ಭರತ್ ರೆಡ್ಡಿ ಅವರು ಸುಮಾರು ₹42 ಕೋಟಿ ಹಣವನ್ನು ಸಂಗ್ರಹಿಸಿ, ಕಾನೂನುಬಾಹಿರವಾಗಿ ಬಳಸಿಕೊಂಡಿದ್ದರು’ ಎಂದು ಇ.ಡಿ ಆರೋಪಿಸಿದೆ.
ಭರತ್ ರೆಡ್ಡಿಯ ಸಹೋದರ ಶರತ್ ರೆಡ್ಡಿ ಎಂಬುವವರು ವಿದೇಶಿ ಮೂಲದ ಕಂಪನಿಗಳಲ್ಲಿ ರಹಸ್ಯ ಹೂಡಿಕೆ ಮಾಡಿದ್ದಾರೆ. ಆರೋಪಿಗಳು ಬೇನಾಮಿಯಾಗಿ ಆಸ್ತಿಗಳಲ್ಲಿ ಹೂಡಿಕೆ ಮಾಡಿರುವುದೂ ಅಲ್ಲದೇ, ಸಂಬಂಧಿಕರಿಂದ ಅನುಮಾನಾಸ್ಪದ ಸಾಲ ಪಡೆದಿದ್ದಾರೆ. ಅವರ ಬ್ಯಾಂಕ್ ಖಾತೆಗಳನ್ನು ಅವರ ಅರಿವಿಲ್ಲದೆ ಬಳಸಿರುವುದು ಕಂಡು ಬಂದಿದೆ ಎಂದು ಇ.ಡಿ ಆರೋಪಿಸಿದೆ.