ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) 2024ನೇ ಸಾಲಿನ ಮುಖ್ಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಿದೆ.
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 23 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಇವರಲ್ಲಿ ತೆಲಂಗಾಣದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮುಖ್ಯ ಪರೀಕ್ಷೆಯ ಮೊದಲ ಆವೃತ್ತಿಯಲ್ಲಿ 11.70 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ ತೆಲಂಗಾಣದ 7, ಹರಿಯಾಣದ ಇಬ್ಬರು, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ತಲಾ ಮೂವರು, ದೆಹಲಿಯ ಇಬ್ಬರು, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡಿನ ತಲಾ ಒಬ್ಬರು ಪೂರ್ಣ ಅಂಕ ಪಡೆದಿದ್ದಾರೆ.
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿತ್ತು. 2 ರಾಷ್ಟ್ರೀಯ ಸಂಯೋಜಕರು, 18 ಪ್ರಾದೇಶಿಕ ಸಂಯೋಜಕರು, 303 ನಗರ ಸಂಯೋಜಕರು, 1,083 ವೀಕ್ಷಕರು, 150 ತಾಂತ್ರಿಕ ವೀಕ್ಷಕರು ಹಾಗೂ 162 ಉಪ ವೀಕ್ಷಕರನ್ನು ನಿಯೋಜಿಸಲಾಗಿತ್ತು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.