ನಾವೆಲ್ಲಾ ಬೆಂಗಳೂರಿನ ಭಾಗ; ಚುನಾವಣೆ ಬಳಿಕ ರೂಪುರೇಷೆ: ಡಿ.ಕೆ. ಶಿವಕುಮಾರ್

ನಾವೆಲ್ಲಾ ಬೆಂಗಳೂರಿನ ಭಾಗ; ಚುನಾವಣೆ ಬಳಿಕ ರೂಪುರೇಷೆ: ಡಿ.ಕೆ. ಶಿವಕುಮಾರ್

ರಾಮನಗರ ಮಾದರಿ ಜಿಲ್ಲೆಯಾಗಿಸಲು ಸಂಕಲ್ಪ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

‘ರಾಮನಗರ ಜಿಲ್ಲೆಯವರು ಬೆಂಗಳೂರಿನವರೇ ಆಗಿದ್ದು, ಜಿಲ್ಲೆಯನ್ನು ಮಾದರಿಯಾಗಿಸಲು ಸಂಕಲ್ಪ ಮಾಡಿದ್ದೇವೆ. ನಾವೆಲ್ಲರೂ ಬೆಂಗಳೂರಿನ ಭಾಗ. ಈ ವಿಚಾರವಾಗಿ ಚುನಾವಣೆ ನಂತರ ಚರ್ಚೆ ಮಾಡಿ ರೂಪುರೇಷೆ ನೀಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ರಾಮನಗರಕ್ಕೆ ಹೊಸದಾಗಿ ಬಂದಿರುವ 25 ಅಶ್ವಮೇಧ ಕ್ಲಾಸಿಕ್ ಬಸ್ಸುಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸಂಸದ ಡಿ.ಕೆ. ಸುರೇಶ್ ಜಿಲ್ಲೆಯನ್ನು ಮಾದರಿ ಮಾಡಲು ಸಂಕಲ್ಪ ಮಾಡಿದ್ದಾರೆ. ಅವರ ಯೋಜನೆಗಳನ್ನು ಜಾರಿಗೊಳಿಸಲು ನಾನು ಸೇರಿದಂತೆ ಎಲ್ಲಾ ಶಾಸಕರು ಸಹಕಾರ ನೀಡುತ್ತೇವೆ’ ಎಂದರು.

‘ಬಿಡದಿ ಪ್ರಾಧಿಕಾರವನ್ನು ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತಿಸಿದ್ದೇವೆ. ಬಿಡದಿವರೆಗೆ ಮೆಟ್ರೊ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಗೆ ಇಲಾಖಾವಾರು ಏನೆಲ್ಲಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸುವೆ’ ಎಂದು ತಿಳಿಸಿದರು.

‘‘ತಮಿಳುನಾಡಿನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಉಚಿತ ಬಸ್ ವ್ಯವಸ್ಥೆ ಇತ್ತು. ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿತು. ಯೋಜನೆಯಿಂದ ದೇವಾಲಯಗಳ ಹುಂಡಿಗಳು ತುಂಬುತ್ತಿವೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಾಗಿದ್ದಾರೆ. ಹೋಟೆಲ್, ವ್ಯಾಪಾರೋದ್ಯಮಗಳಲ್ಲಿ ವ್ಯಾಪಾರ–ವಹಿವಾಟು ಹೆಚ್ಚಾಗುತ್ತಿದೆ’ ಎಂದು ಹೇಳಿದರು.

‘ಧರ್ಮಸ್ಥಳಕ್ಕೂ ಬರುವವರು ಹೆಚ್ಚಾಗಿದ್ದಾರೆಂದು ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಯೋಜನೆಯನ್ನು ಶ್ಲಾಘಿಸಿದ್ದರು. ಮಹಿಳೆಯರು ನನ್ನ ಹಾಗೂ ಸಿದ್ದರಾಮಯ್ಯ ಅವರ ಹೆಸರಿನಲ್ಲೂ ಪೂಜೆ ಮಾಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದವು’ ಎಂದರು.

Share this post

Post Comment