‘ಉತ್ತರಾಖಂಡದಲ್ಲಿ ₹2 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳು 2024ರ ಡಿಸೆಂಬರ್ ಅಂತ್ಯದ ಹೊತ್ತಿಗೆ ಅಮೆರಿಕದ ರಸ್ತೆಗಳಂತಾಗಲಿವೆ’ ಎಂದು ಕೇಂದ್ರ ರಸ್ತೆ ಸಂಚಾರ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.
ಟನಕಪುರದಲ್ಲಿ ₹2 ಸಾವಿರ ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಉತ್ತರಾಖಂಡದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ₹1.40 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ₹60 ಸಾವಿರ ಕೋಟಿಯನ್ನು ಶೀಘ್ರದಲ್ಲಿ ಮಂಜೂರು ಮಾಡಲಾಗುವುದು’ ಎಂದಿದ್ದಾರೆ.
‘ಈ ವರ್ಷಾಂತ್ಯದಲ್ಲಿ ಉತ್ತರಾಖಂಡದ ರಸ್ತೆಗಳು ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಸರಿಹೊಂದಲಿದೆ. ಉತ್ತರಾಖಂಡದ ರಸ್ತೆಗಳು ಅಮೆರಿಕದ ರಸ್ತೆಗಳಂತಾಗಲಿವೆ ಎಂಬುದನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಹೇಳಬಯಸುತ್ತೇನೆ. 2014ರಲ್ಲಿ ಉತ್ತರಾಖಂಡದಲ್ಲಿ 2,517 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ಈಗ ಅದು 3,608 ಕಿ.ಮೀ. ಗೆ ಹೆಚ್ಚಿಸಲಾಗಿದೆ’ ಎಂದು ಗಡ್ಕರಿ ಹೇಳಿದ್ದಾರೆ.
ಮಾನಸಖಂಡ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಟನಕಪುರ ಬಳಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಧಾಮಿ ಧನ್ಯವಾದ ಅರ್ಪಿಸಿದ್ದಾರೆ. ಬಹುದಿನಗಳಿಂದ ಬಾಕಿ ಉಳಿದಿದ್ದ ಈ ರಸ್ತೆಯ ಕಾಮಗಾರಿಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಗಡ್ಕರಿಗೆ ಧನ್ಯವಾದ ಹೇಳಿದ್ದಾರೆ. ಉತ್ತರಾಖಂಡದ ಅಭಿವೃದ್ಧಿಗೆ ಕೇಳುವ ಮೊದಲೇ ಯೋಜನೆ ಮಂಜೂರು ಮಾಡಿರುವುದು ಸಂತಸದ ವಿಷಯ ಎಂದಿದ್ದಾರೆ.