ನಿಗಮ-ಮಂಡಳಿ: ‘ಕೈ’ ಪಾಳಯದಲ್ಲಿ ಮುಸುಕಿನ ಸಂಘರ್ಷ- ಸಿಎಂಗೆ ದೂರು

ನಿಗಮ-ಮಂಡಳಿ: ‘ಕೈ’ ಪಾಳಯದಲ್ಲಿ ಮುಸುಕಿನ ಸಂಘರ್ಷ- ಸಿಎಂಗೆ ದೂರು

: ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ನಿಲುವಿಗೆ ಹಲವು ಸಚಿವರು ಆಕ್ಷೇಪ ಎತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಮುಸುಕಿನ ಸಂಘರ್ಷ ಜೋರಾಗುವ ಲಕ್ಷಣ ಕಾಣಿಸುತ್ತಿದೆ.

34 ಮಂದಿ ಕಾರ್ಯಕರ್ತರಿಗೆ ಅಧಿಕಾರ ನೀಡುವ ಪಟ್ಟಿಯೊಂದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದ್ದರು. ಈ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಸಚಿವರು ತಗಾದೆ ತೆಗೆದಿದ್ದರು. ಅವರೊಂದಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಪ್ರಮುಖರೂ ದನಿಗೂಡಿಸಿದ್ದಾರೆ.

ಸಿ.ಎಂ ಬಳಿ ದೂರು: ‘ಬಹುತೇಕ ಜಿಲ್ಲೆಗಳಲ್ಲಿ ಸಚಿವರ ಅಭಿಪ್ರಾಯ ಪಡೆಯದೇ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪಟ್ಟಿಯ ಪ್ರಕಾರವೇ ಅಧಿಕಾರ ಹಂಚಿಕೆಯಾದರೆ ಪಕ್ಷ ಸಂಘಟನೆಗೆ ಹೊಡೆತ ಬೀಳುತ್ತದೆ ಎಂಬ ಅಭಿಪ್ರಾಯ ಹೇಳಿದ್ದಾರೆ’ ಎಂದು ಸಚಿವರೊಬ್ಬರು ತಿಳಿಸಿದರು.

ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕೆಲವು ಮುಖಂಡರು ತೀವ್ರ ಬೇಸರ ಹೊರ ಹಾಕಿದ್ದಾರೆ. ಬಯಲುಸೀಮೆಯ ಜಿಲ್ಲೆಯ ಕೆಲವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ನಿಗಮ, ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಿದರು.

Share this post

Post Comment