ಬರ ಪರಿಹಾರ ನೀಡಿಕೆಯಲ್ಲಿ ತಾರತಮ್ಯ: ಕೇಂದ್ರದ ನಡೆಗೆ ರಾಜ್ಯಪಾಲರ ‘ಕಿಡಿ’

ಬರ ಪರಿಹಾರ ನೀಡಿಕೆಯಲ್ಲಿ ತಾರತಮ್ಯ: ಕೇಂದ್ರದ ನಡೆಗೆ ರಾಜ್ಯಪಾಲರ ‘ಕಿಡಿ’

ತೆರಿಗೆ ಹಂಚಿಕೆ ಪಾಲು, ಬರ ಪರಿಹಾರ ನೀಡಿಕೆಯಲ್ಲಿ ತಾರತಮ್ಯ: ಗೆಹಲೋತ್ ‘ನ್ಯಾಯ, ಧರ್ಮದ ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಿಗಬೇಕಾದ ತೆರಿಗೆ ಪಾಲು ಸಿಗುತ್ತಿಲ್ಲ; ಅನೇಕ ಜ್ಞಾಪನ ಪತ್ರಗಳನ್ನು ಸಲ್ಲಿಸಿದರೂ ಬರ ಪರಿಹಾರ ಸಿಕ್ಕಿಲ್ಲ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಕೇಂದ್ರ ಸರ್ಕಾರವು ಕರ್ನಾಟಕದ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆಪಾದಿಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಮ್ಮ ಸಚಿವರು, ಶಾಸಕರ ದಂಡಿನೊಂದಿಗೆ ಇತ್ತೀಚೆಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ, ದೇಶದ ಗಮನ ಸೆಳೆದಿತ್ತು. ಆ ಬೆನ್ನಲ್ಲೇ, ರಾಜ್ಯಪಾಲರ ಭಾಷಣದಲ್ಲೂ ರಾಜ್ಯದ ವಿಷಯದಲ್ಲಿ ಕೇಂದ್ರದ ಧೋರಣೆಯನ್ನು ಪ್ರಸ್ತಾವಿಸಲಾಗಿದೆ.

‘ಎಲ್ಲ ಜನಪರ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಆದರೆ, ತೆರಿಗೆ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದೆ. ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯುಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಬರಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಹಾರ ಕ್ರಮಗಳಿಗಾಗಿ ಎನ್‌ಡಿಆರ್‌ಎಫ್‌ನಿಂದ ₹18,171.44 ಕೋಟಿ ಆರ್ಥಿಕ ನೆರವು ಕೋರಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ  ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಖಾರಿಫ್‌ ಬರ ಪರಿಹಾರಕ್ಕೆ ಜ್ಞಾಪನ ಪತ್ರಗಳನ್ನು ಸಲ್ಲಿಸಿದೆ. ಆದರೆ, ಈವರೆಗೂ ಯಾವುದೇ ಹಣ ಬಿಡುಗಡೆ ಆಗಿಲ್ಲ’ ಎಂದೂ ಹೇಳಿದರು.

‘ಬರ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ನಾವು ಈ ಬಾರಿ ಸಂಪೂರ್ಣ ಪಾರದರ್ಶಕತೆ ತಂದಿದ್ದೇವೆ. ಹಿಂದಿನ ವರ್ಷಗಳಲ್ಲಿ ನೀಡಿದ ಪರಿಹಾರಗಳಲ್ಲಿ ಮತ್ತು ಇನ್‌ಪುಟ್‌ ಸಬ್ಸಿಡಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ಸರ್ಕಾರ ಗಮನಕ್ಕೆ ಬಂದಿದೆ. ಅರ್ಹ ರೈತರಿಗೆ ಪರಿಹಾರ ಸಿಗದೆ ಅನರ್ಹರಿಗೆ ಪರಿಹಾರ ನೀಡಿದ ಅನೇಕ ಪ್ರಕರಣಗಳು ಗಮನಕ್ಕೆ ಬಂದಿವೆ’ ಎಂದರು.

Share this post

Post Comment