ಹೆಲ್ಮೆಟ್ ರಹಿತ ಸವಾರಿ: ದ್ವಿಚಕ್ರ ವಾಹನ ತಡೆದಿದ್ದ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಕಾನ್ಸ್ಟೆಬಲ್ವೊಬ್ಬರ ಕೈ ಬೆರಳು ಕಚ್ಚಿ ಗಾಯಗೊಳಿಸಿದ್ದ ಆರೋಪದಡಿ ದ್ವಿಚಕ್ರ ವಾಹನ ಸವಾರ ಸೈಯದ್ ಶಫಿಯನ್ನು (28) ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬಿಟಿಎಂ 1ನೇ ಹಂತದ 6ನೇ ಮುಖ್ಯರಸ್ತೆ ನಿವಾಸಿ ಸೈಯದ್ ಶಫಿ, ಎಂಬಿಎ ಪದವೀಧರ. ಗುಜರಿ ವ್ಯಾಪಾರ ಮಾಡುತ್ತಿದ್ದ. ಈತನ ಕೃತ್ಯದ ವಿರುದ್ಧ ಹೆಡ್ ಕಾನ್ಸ್ಟೆಬಲ್ ಸಿದ್ರಾಮೇಶ್ವರ್ ಕೌಜಲಗಿ ಅವರು ದೂರು ನೀಡಿದ್ದಾರೆ. ವಿಡಿಯೊ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೆಡ್ ಕಾನ್ಸ್ಟೆಬಲ್ಗಳಾದ ಸಿದ್ರಾಮೇಶ್ವರ್ ಕೌಜಲಗಿ ಹಾಗೂ ಲೋಕೇಶ್, ಮರಿಗೌಡ ರಸ್ತೆಯ 10ನೇ ಅಡ್ಡರಸ್ತೆ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರೋಪಿ ಸೈಯದ್ ಶಫಿ, ಹೆಲ್ಮೆಟ್ ಧರಿಸದೇ ತನ್ನ ದ್ವಿಚಕ್ರ ವಾಹನದಲ್ಲಿ (ಕೆಎ 05 ಎಲ್ಎನ್ 7938) ಹೊರಟಿದ್ದ. ಅದನ್ನು ನೋಡಿದ್ದ ಸಿದ್ರಾಮೇಶ್ವರ್, ಮೊಬೈಲ್ನಲ್ಲಿ ವಾಹನದ ಫೋಟೊ ಕ್ಲಿಕ್ಕಿಸಲು ಮುಂದಾಗಿದ್ದರು.’
‘ಸಿದ್ರಾಮೇಶ್ವರ್ ಮೇಲೆಯೇ ಹರಿಹಾಯ್ದಿದ್ದ ಆರೋಪಿ ಸೈಯದ್, ‘ಫೋಟೊ ಏಕೆ ತೆಗೆಯುತ್ತಿದ್ದಿಯಾ? ನನ್ನ ವಾಹನದ ನೋಂದಣಿ ಸಂಖ್ಯೆ ಫಲಕ ಬಿಚ್ಚಿ ಕೊಡುತ್ತೇನೆ. ಬೇಕಾದಷ್ಟೂ ಪ್ರಕರಣ ದಾಖಲಿಸು’ ಎಂದಿದ್ದ. ನಂತರ, ಸ್ಥಳದಿಂದ ಹೊರಟು ಹೋಗಲು ಯತ್ನಿಸಿದ್ದ. ಸಿದ್ರಾಮೇಶ್ವರ್ ಅವರು ವಾಹನದ ಕೀ ಕಸಿದುಕೊಂಡಿದ್ದರು. ಕೀ ಕಿತ್ತುಕೊಳ್ಳಲು ಮುಂದಾಗಿದ್ದ ಆರೋಪಿ, ಸಿದ್ರಾಮೇಶ್ವರ್ ಅವರ ಕೈ ಬೆರಳು ಕಚ್ಚಿದ್ದ’ ಎಂದು ಪೊಲೀಸರು ತಿಳಿಸಿದರು.
‘ಸಿದ್ರಾಮೇಶ್ವರ್ ಹಾಗೂ ಲೋಕೇಶ್ ಇಬ್ಬರೂ ಸೇರಿ ಆರೋಪಿಯನ್ನು ಹಿಡಿದುಕೊಂಡಿದ್ದರು. ಸ್ಥಳೀಯರು ಸಹ ಜಮಾಯಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿ, ಪೊಲೀಸರಿಗೆ ಜೀವ ಬೆದರಿಕೆಯೊಡ್ಡಿದ್ದ. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದರು. ಆರೋಪಿ ಕೃತ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ’ ಎಂದು ಹೇಳಿದರು.