ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!

‘ಪ್ರಕರಣದ ಪ್ರಮುಖ ಆರೋಪಿಗಳಾದ ಚೈತ್ರಾ ಕುಂದಾಪುರ, ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ ಹಾಗೂ ಇತರರಿಗೆ ಸೇರಿದ್ದ ಜಾಗಗಳಲ್ಲಿ ನಿರಂತರವಾಗಿ ಶೋಧ ನಡೆಸಲಾಗಿದೆ. ನಗದು, ಚಿನ್ನಾಭರಣ, ಠೇವಣಿ, ಆಸ್ತಿ ದಾಖಲೆಗಳು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 3.67 ಕೋಟಿ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ವಂಚನೆಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ದೂರಿನಲ್ಲಿದ್ದ ಸಂಗತಿಗಳಿಗೆ ‍ಪೂರಕವಾದ ಪುರಾವೆಗಳನ್ನು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಅದಕ್ಕೆ ತಕ್ಕಂತೆ ಮಹಜರು ಹಾಗೂ ಜಪ್ತಿ ಪ್ರಕ್ರಿಯೆ ಸಹ ನಡೆಸಲಾಗಿದೆ’ ಎಂದು ಹೇಳಿದರು.

‘ಹಾಲಶ್ರೀ ಸ್ವಾಮೀಜಿಗೆ ಸಂಬಂಧಿಸಿದ ಮಹಜರು ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇರುವುದರಿಂದ, ಸ್ವಾಮೀಜಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅವರಿಂದ ಹೇಳಿಕೆ ಪಡೆದ ನಂತರ, ಬೇರೆ ಯಾರಾದರೂ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾದರೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಬಂಧಿತ ಆರೋಪಿಗಳಿಂದ ₹ 3.67 ಕೋಟಿ ಜಪ್ತಿ ಮಾಡಿದ್ದಾರೆ. ₹ 25 ಲಕ್ಷ ಕೊಟ್ಟು ಹಾಲವೀರಪ್ಪ ಸ್ವಾಮೀಜಿ ಖರೀದಿಸಿದ್ದ ಇನ್ನೋವಾ ಕಾರನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ..

ಚೈತ್ರಾ ನ್ಯಾಯಾಲಯಕ್ಕೆ ಇಂದು: ‘ಚೈತ್ರಾ ಕುಂದಾಪುರ, ಗಗನ್ ಹಾಗೂ ಇತರೆ ಆರೋಪಿಗಳ ಕಸ್ಟಡಿ ಅವಧಿ ಶನಿವಾರ ಮುಗಿಯಲಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಮಹಜರು, ಹೇಳಿಕೆ ದಾಖಲು ಹಾಗೂ ಇತರೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಶನಿವಾರ ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಅಧಿಕಾರಿ ತಿಳಿಸಿದರು.

Share this post

Post Comment